- ನಿಜವಾದ ಪರಿಸರವಾದಿಗಳು ಮಲೆನಾಡಿನ ದಟ್ಟ ಅರಣ್ಯಗಳಲ್ಲಿ ಬೆಳೆಯುವ ಅಮೂಲ್ಯ ಜಾತಿಯ ಮರಗಳನ್ನು ಬಯಲು ಪ್ರದೇಶಗಳಲ್ಲಿ ಹೇಗೆ ಬೆಳೆಸಬಹುದೆಂದು ಚಿಂತನೆ ನೆಡೆಸಬೇಕು
- ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳಿಂದ ಹೊರಸೂಸುವ ವಿಕಿರಣವನ್ನು ಕಡಿಮೆಮಾಡಲು ಏನು ಮಾಡಬೇಕೆಂದು ಅಧ್ಯಯನ ಮಾಡಬೇಕು
- ಅಗತ್ಯವಿದ್ದಾಗ ಮಾತ್ರ ತಮ್ಮ ವಾಹನಗಳನ್ನು ಬಳಸಬೇಕು.
- ಮೆಟ್ರೋ ರೈಲು, ವಿದ್ಯುತ್ ಸ್ಥಾವರಗಳು ಇಂದಿನ ದಿನದ ಅನಿವಾರ್ಯತೆ ಎಂದು ಅರ್ಥ ಮಾಡಿಕೊಳ್ಳಬೇಕು.
- ಒಂದು ಉದಾಹರಣೆಗೆ ವಾರಾಹಿ ಜಲವಿದ್ಯುತ್ ಯೋಜನೆಗಾಗಿ ಮರಗಳನ್ನು ಕಡಿಯಲು ನೂರಾರು ಲಾರಿಗಳು, ನೂರಾರು ಆನೆಗಳು ತಿಂಗಳುಗಟ್ಟಲೆ ಕೆಲಸ ಮಾಡಿದವು. ಸಾವಿರಾರು ಎಕರೆ ಜಾಗದಿಂದ ಲಕ್ಷಾಂತರ ಮರಗಳನ್ನು ಕಡಿಯಲಾಯಿತು. ಇಂದು ನಾವು ಅನುಭವಿಸುತ್ತಿರುವ ವಿದ್ಯುತ್ತಿನಲ್ಲಿ ಒಂದು ಪಾಲು ವಾರಾಹಿಯಿಂದಲೂ ಬರುತ್ತಿದೆ. ನಾನು ಇದಕ್ಕಾಗಿ ಎಷ್ಟು ಗಿಡಗಳನ್ನು ನೆಟ್ಟು ಪೋಷಿಸಿದ್ದೇನೆ ಎಂದು ಪ್ರತಿಯೊಬ್ಬ ಪರಿಸರವಾದಿಯೂ ಪ್ರಶ್ನೆ ಮಾಡಿಕೊಳ್ಳಬೇಕು
- ಪರಿಸರವಾದಿಗಳು ಸಾಮಾನ್ಯ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು
Tuesday, October 2, 2007
ನಕಲಿ ಪರಿಸರವಾದ
ಇತ್ತೀಚೆಗೆ ಮೆಟ್ರೊ ರೈಲು ಕಾಮಗಾರಿಗಾಗಿ ಮರಗಳನ್ನು ಕಡಿಯಬೇಕಾಗಿ ಬಂದಾಗ ಪರಿಸರವಾದಿಗಳು ಅದನ್ನು ವಿರೋಧಿಸಿದ್ದನ್ನು ಗಮನಿಸಿದೆ. ಒಂದು ರೈಲು ಬಂಡಿ ಓಡಿದಾಗ ಅದು ಹೊರಸೂಸೂವ ಹೊಗೆ, ಹಾಗೂ ಅದರಲ್ಲಿ ಓಡಾಡುವ 50% ಜನ ತಮ್ಮ ಕಾರು ಅಥವಾ ದ್ವಿಚಕ್ರ ವಾಹನಗಳಲ್ಲಿ ಓಡಾಡಿದರೆ ಅದರಿಂದ ಬರುವ ಒಟ್ಟು ಹೊಗೆ ಇವೆರಡನ್ನು ಹೋಲಿಸಿದರೆ ಖಂಡಿತ ರೈಲು ಬಂಡಿಯ ಹೊಗೆ ಕಡಿಮೆ ಇರುತ್ತದೆ. ಮಾಲಿನ್ಯವನ್ನು ತಗ್ಗಿಸುವುದು ಪರಿಸರಕ್ಕೆ ಅನುಕೂಲಕರವಲ್ಲವೇ? ಈ ಪರಿಸರವಾದಿಗಳು ಸುದ್ದಿ ಮಾಡುವ ಸನ್ನಿವೇಶಗಳಿಗಾಗಿ ಕಾಯುತ್ತಿರುತ್ತಾರೇನೋ ಅನ್ನಿಸುತ್ತದೆ. ಒಂದು ಆಣೇಕಟ್ಟು ಕಟ್ಟಬೇಕು, ಒಂದು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಬೇಕು ಎಂದಾಗ ಪರಿಸರವಾದಿಗಳು ಬೊಬ್ಬೆ ಇಡಲು ಪ್ರಾರಂಭಿಸುತ್ತಾರೆ. ಆದರೆ ಇವರ ಮನೆಗಳಲ್ಲಿ ಜಗಮಗಿಸುತ್ತಿರುವ ವಿದ್ಯುತ್ ರಾಯಚೂರಿನ ಸದಾ ಹೊಗೆ ಉಗುಳುವ ಸ್ತಾವರಗಳಿಂದ, ಸಾವಿರಾರು ಎಕರೆ ಕಾಡನ್ನು ಮುಳುಗಿಸಿ, ನೂರಾರು ಊರುಗಳನ್ನು ಮುಳುಗಿಸಿ ನಿಂತಿರುವ ಆಣೇಕಟ್ಟುಗಳಿಂದ ಎಂಬುದನ್ನು ಮರೆಯುತ್ತಾರೆ. ದೇಶದಲ್ಲಿ ಅದೆಷ್ಟು ಮಂದಿ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ಸಾಗಿಸುತ್ತಿದ್ದಾರೆ ಎಂಬ ಕಲ್ಪನೆ ಇವರಿಗೆ ಇದ್ದಂತಿಲ್ಲ.
Saturday, September 15, 2007
ಬೆಂಗಳೂರಿನ ಸಿಟಿ ಬಸ್ಸುಗಳು ಮತ್ತು ಜಿ.ಪಿ.ಎಸ್
ಇತ್ತೀಚೆಗೆ ಬೆಂಗಳೂರಿನ ಓಲ್ವೋ ಬಸ್ಸುಗಳಲ್ಲಿ ಜಿ.ಪಿ.ಎಸ್ ಟಿವಿಗಳನ್ನು ಅಳವಡಿಸಿರುವುದು ಹೆಮ್ಮೆಯ ಸಂಗತಿ. ಇದರಿಂದ ಪ್ರಯಾಣಿಕ ಯಾವುದೇ ಕ್ಷಣದಲ್ಲಿ ಬೆಂಗಳೂರಿನ ನಕ್ಷೆಯಲ್ಲಿ ಯಾವ ಜಾಗದಲ್ಲಿ ಚಲಿಸುತ್ತಿದ್ದೇನೆ ಎಂದು ತಿಳಿದುಕೊಳ್ಳಬಹುದು. 3 ಉಪಗ್ರಹಗಳ ಸಹಾಯದಿಂದ ತಾನು ಇರುವ ಜಾಗವನ್ನು ಕರಾರುವಕ್ಕಾಗಿ ಗುರುತಿಸುವ ಉಪಕರಣವೇ ಜಿ.ಪಿ.ಎಸ್. ಇದು ಅಕ್ಷಾಂಶ ಮತ್ತು ರೇಖಾಂಶಗಳಲ್ಲಿ ಮಾಹಿತಿಯನ್ನು ಒದಗಿಸುತ್ತದೆ. ಇದನ್ನು ಬಳಸಿಕೊಂಡು ಹಲವಾರು ಮಾಹಿತಿಗಳನ್ನು ತಂತ್ರಾಂಶದ ಸಹಾಯದಿಂದ ತೋರಿಸುತ್ತಾರೆ. ಬಸ್ಸಿನ ಸರಾಸರಿ ವೇಗ ಮತ್ತು ದೂರವನ್ನು ಆದರಿಸಿ ಮುಂದಿನ ನಿಲ್ದಾಣಗಳಿಗೆ ಯಾವ ಸಮಯದಲ್ಲಿ ತಲುಪುತ್ತೀರಿ ಎಂದು ತೋರಿಸುತ್ತಿರುತ್ತದೆ. ಒಂದು ವೇಳೆ ಬಸ್ಸು ಟ್ರಾಫಿಕ್ ಸಿಗ್ನಲ್ ನಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಇಟ್ಟುಕೊಳ್ಳಿ. ಆಗ ಸಮಯವನ್ನು ಮತ್ತೆ ಮತ್ತೆ ಹೊಸದಾಗಿ ಲೆಕ್ಕ ಹಾಕಿ ತಿಳಿಸುತ್ತದೆ. ಚಾಲಕ ವೇಗವನ್ನು ಹೆಚ್ಚು ಮಾಡಿ ಓಡಿಸಿದರೆ, ತಾನು ಲೆಕ್ಕ ಹಾಕಿದ ಸಮಯಗಳನ್ನೆಲ್ಲ ತಗ್ಗಿಸಿ ತೋರಿಸುತ್ತದೆ. ನಕ್ಷೆಯನ್ನು ಹಿಗ್ಗಿಸಿ, ಕುಗ್ಗಿಸಿ, ಕೆಲವೊಮ್ಮೆ ಸರಳ ರೇಖೆಯಂತೆ ತೋರಿಸಿ ಪ್ರಯಾಣಿಕರಿಗೆ ಬಸ್ಸು ಎಲ್ಲಿ ಓಡುತ್ತಿದೆ, ಇದರ ಸುತ್ತಮುತ್ತಲಿನ ಪ್ರದೇಶಗಳು ಯಾವುವು ಎಂದು ತೋರಿಸುತ್ತಾ ಸಾಗುತ್ತದೆ. ಅಪರಿಚಿತ ಪ್ರದೇಶಗಳಿಗೆ ಹೋಗುವಾಗ ನನಗೆ ಕಾಡುವ ಪ್ರಶ್ನೆ ನಾನು ಈಗ ಎಲ್ಲಿ ಇದ್ದೇನೆ ಮತ್ತು ಇನ್ನು ಎಷ್ಟು ಹೊತ್ತು ಪ್ರಯಾಣಿಸಬೇಕು ಎಂದು. ಲಂಡನ್ನಿನ ಬಸ್ಸುಗಳಲ್ಲಿ ಇತ್ತೀಚೆಗೆ ಪ್ರಯಾಣಿಸುವಾಗ ಪರದಾಡುತ್ತಿದ್ದೆ. ಅಲ್ಲಿನ ಕಾರುಗಳಲ್ಲಿ ಜಿ.ಪಿ.ಎಸ್ ಸಾಮಾನ್ಯವಾದರೂ ಬಸ್ಸುಗಳಲ್ಲಿ ನೋಡಿರಲಿಲ್ಲ. ಅಂತಹ ವ್ಯವಸ್ಥೆ ಬೆಂಗಳೂರಿಗರಿಗೆ ಸಿಕ್ಕಿರುವುದು ಖುಷಿಪಡುವ ವಿಷಯ. ಈ ವ್ಯವಸ್ಥೆ ನಾಡಿನ, ದೇಶದ ಎಲ್ಲ ಜನರಿಗೆ ತಲುಪಬೇಕು. ತಂತ್ರಾಂಶವನ್ನು ರೂಪಿಸಿದವರಿಗೆ ಧನ್ಯವಾಧಗಳು.
Subscribe to:
Posts (Atom)