Saturday, September 15, 2007
ಬೆಂಗಳೂರಿನ ಸಿಟಿ ಬಸ್ಸುಗಳು ಮತ್ತು ಜಿ.ಪಿ.ಎಸ್
ಇತ್ತೀಚೆಗೆ ಬೆಂಗಳೂರಿನ ಓಲ್ವೋ ಬಸ್ಸುಗಳಲ್ಲಿ ಜಿ.ಪಿ.ಎಸ್ ಟಿವಿಗಳನ್ನು ಅಳವಡಿಸಿರುವುದು ಹೆಮ್ಮೆಯ ಸಂಗತಿ. ಇದರಿಂದ ಪ್ರಯಾಣಿಕ ಯಾವುದೇ ಕ್ಷಣದಲ್ಲಿ ಬೆಂಗಳೂರಿನ ನಕ್ಷೆಯಲ್ಲಿ ಯಾವ ಜಾಗದಲ್ಲಿ ಚಲಿಸುತ್ತಿದ್ದೇನೆ ಎಂದು ತಿಳಿದುಕೊಳ್ಳಬಹುದು. 3 ಉಪಗ್ರಹಗಳ ಸಹಾಯದಿಂದ ತಾನು ಇರುವ ಜಾಗವನ್ನು ಕರಾರುವಕ್ಕಾಗಿ ಗುರುತಿಸುವ ಉಪಕರಣವೇ ಜಿ.ಪಿ.ಎಸ್. ಇದು ಅಕ್ಷಾಂಶ ಮತ್ತು ರೇಖಾಂಶಗಳಲ್ಲಿ ಮಾಹಿತಿಯನ್ನು ಒದಗಿಸುತ್ತದೆ. ಇದನ್ನು ಬಳಸಿಕೊಂಡು ಹಲವಾರು ಮಾಹಿತಿಗಳನ್ನು ತಂತ್ರಾಂಶದ ಸಹಾಯದಿಂದ ತೋರಿಸುತ್ತಾರೆ. ಬಸ್ಸಿನ ಸರಾಸರಿ ವೇಗ ಮತ್ತು ದೂರವನ್ನು ಆದರಿಸಿ ಮುಂದಿನ ನಿಲ್ದಾಣಗಳಿಗೆ ಯಾವ ಸಮಯದಲ್ಲಿ ತಲುಪುತ್ತೀರಿ ಎಂದು ತೋರಿಸುತ್ತಿರುತ್ತದೆ. ಒಂದು ವೇಳೆ ಬಸ್ಸು ಟ್ರಾಫಿಕ್ ಸಿಗ್ನಲ್ ನಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಇಟ್ಟುಕೊಳ್ಳಿ. ಆಗ ಸಮಯವನ್ನು ಮತ್ತೆ ಮತ್ತೆ ಹೊಸದಾಗಿ ಲೆಕ್ಕ ಹಾಕಿ ತಿಳಿಸುತ್ತದೆ. ಚಾಲಕ ವೇಗವನ್ನು ಹೆಚ್ಚು ಮಾಡಿ ಓಡಿಸಿದರೆ, ತಾನು ಲೆಕ್ಕ ಹಾಕಿದ ಸಮಯಗಳನ್ನೆಲ್ಲ ತಗ್ಗಿಸಿ ತೋರಿಸುತ್ತದೆ. ನಕ್ಷೆಯನ್ನು ಹಿಗ್ಗಿಸಿ, ಕುಗ್ಗಿಸಿ, ಕೆಲವೊಮ್ಮೆ ಸರಳ ರೇಖೆಯಂತೆ ತೋರಿಸಿ ಪ್ರಯಾಣಿಕರಿಗೆ ಬಸ್ಸು ಎಲ್ಲಿ ಓಡುತ್ತಿದೆ, ಇದರ ಸುತ್ತಮುತ್ತಲಿನ ಪ್ರದೇಶಗಳು ಯಾವುವು ಎಂದು ತೋರಿಸುತ್ತಾ ಸಾಗುತ್ತದೆ. ಅಪರಿಚಿತ ಪ್ರದೇಶಗಳಿಗೆ ಹೋಗುವಾಗ ನನಗೆ ಕಾಡುವ ಪ್ರಶ್ನೆ ನಾನು ಈಗ ಎಲ್ಲಿ ಇದ್ದೇನೆ ಮತ್ತು ಇನ್ನು ಎಷ್ಟು ಹೊತ್ತು ಪ್ರಯಾಣಿಸಬೇಕು ಎಂದು. ಲಂಡನ್ನಿನ ಬಸ್ಸುಗಳಲ್ಲಿ ಇತ್ತೀಚೆಗೆ ಪ್ರಯಾಣಿಸುವಾಗ ಪರದಾಡುತ್ತಿದ್ದೆ. ಅಲ್ಲಿನ ಕಾರುಗಳಲ್ಲಿ ಜಿ.ಪಿ.ಎಸ್ ಸಾಮಾನ್ಯವಾದರೂ ಬಸ್ಸುಗಳಲ್ಲಿ ನೋಡಿರಲಿಲ್ಲ. ಅಂತಹ ವ್ಯವಸ್ಥೆ ಬೆಂಗಳೂರಿಗರಿಗೆ ಸಿಕ್ಕಿರುವುದು ಖುಷಿಪಡುವ ವಿಷಯ. ಈ ವ್ಯವಸ್ಥೆ ನಾಡಿನ, ದೇಶದ ಎಲ್ಲ ಜನರಿಗೆ ತಲುಪಬೇಕು. ತಂತ್ರಾಂಶವನ್ನು ರೂಪಿಸಿದವರಿಗೆ ಧನ್ಯವಾಧಗಳು.
Subscribe to:
Post Comments (Atom)
No comments:
Post a Comment